Monday, May 25, 2020

75ರ ಸಂಭ್ರಮದಲ್ಲಿ ಬಣ್ಣಗಳ ಮಾಂತ್ರಿಕ ಕಲಾವಿದ ದೇವದಾಸ ಶೆಟ್ಟಿ

ಹೆಸರಾಂತ ಕಲಾವಿದ ದೇವದಾಸ ಶೆಟ್ಟಿ ಅವರು ಚಿತ್ರಕಾರರಾಗಿ, ಲೇಖಕರಾಗಿ ಜನಪ್ರಿಯರಾಗಿದ್ದಾರೆ. ಮುಂಬಯಿ ವಾಣಿಜ್ಯ ನಗರವಷ್ಟೇ ಅಲ್ಲ; ಕಲೆ, ಸಾಹಿತ್ಯ ಬಹು ಸಂಸ್ಕೃತಿಗಳ ಸಂಗಮವೂ ಆಗಿದೆ. ಮುಂಬೈ ಮಹಾನಗರ ಅನೇಕ ಕಲಾವಿದರನ್ನು ರೂಪಿಸಿದೆ. ಕೆ.ಕೆ.ಹೆಬ್ಬಾರ್ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಪ್ರತಿಭಾವಂತ ಕಲಾವಿದ. ಈ ಸಾಲಿನಲ್ಲಿ ಕೇಳಿಬರುವ ಮುಂಬೈನ ಇನ್ನೋರ್ವ ಕಲಾವಿದ ದೇವದಾಸ ಶೆಟ್ಟಿ ಚಿತ್ರಕಲೆಯನ್ನು ಉಸಿರಾಗಿಸಿಕೊಂಡ ಅಪೂರ್ವ ಸೃಜನಶೀಲ ಕಲಾವಿದ ದೇವದಾಸ ಶೆಟ್ಟಿ ಅಪ್ಪಟ ಕನ್ನಡಿಗ. ತಮ್ಮನ್ನು ತಾವು ರೂಪಿಸಿಕೊಂಡ ದೇವದಾಸ ಶೆಟ್ಟಿ ಅವರು ಪಟ್ಟಪಾಡು, ಕಂಡುಂಡ ನೋವು, ನಲಿವು ಅವರ ಕೈಯಲ್ಲಿ ಕಲೆಯಾಗಿ ಅಭಿವ್ಯಕ್ತಗೊಂಡಿವೆ. ನೂರಾರು ಚಿತ್ರ ಪ್ರದರ್ಶನಗಳ ಮೂಲಕ ಕಲಾವಿದರ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿರುವ ಅವರು ಇಂದು ನಮ್ಮ ನಾಡಿನ ನಾಮಾಂಕಿತ ಕಲಾವಿದರಲ್ಲಿ ಒಬ್ಬರು ಎಂಬುದು ಹೆಮ್ಮೆಯ ಸಂಗತಿ. ಕಲಾ ಪ್ರಪಂಚದಲ್ಲಿ ತನ್ನದೇ ಆದ ಹಾದಿಯಲ್ಲಿ ಸಾಗಿ ಅನೇಕ ಸಂಘರ್ಷ, ಸಂಕಷ್ಟಗಳ ನಡುವೆಯೂ ಸಾಧನೆಯ ಶಿಖರವೇರಿ ನಿಂತ ಪ್ರಬುದ್ಧ ಕಲಾವಿದ ದೇವದಾಸ ಶೆಟ್ಟಿ ಅವರ ಯೆಶೋಗಾಥೆ ಬಲು ರೋಚಕವಾಗಿದೆ.

ದೂರದ ಮುಂಬೈ ಮಹಾನಗರದಲ್ಲಿ ಅರಳಿದ ಪ್ರತಿಭೆ ದೇವದಾಸ ಶೆಟ್ಟಿ. ಅವರ ತಂದೆ ಮೂಲತ: ಮೂಡಬಿದಿರೆಯವರು. ಹೋಟೇಲ್ ಉದ್ಯಮದಲ್ಲಿ ಉಂಟಾದ ಹಠಾತ್ ಏರುಪೇರಿನಿಂದ ಬೀದಿಗೆ ಬಿದ್ದ ಕುಟುಂಬ ಅವರದು. ರಾತ್ರಿ ಶಾಲೆಯಲ್ಲಿ ಓದಿ ಬೆಳೆದ ಹುಡುಗ ಕಲಾವಿದನಾಗಿ ರೂಪುಗೊಂಡದ್ದು ಅಚ್ಚರಿಯ ವಿಷಯ. ಬಡತನದಲ್ಲೇ ಬೆಳೆದ ಅವರು ಹೇಳಿಕೊಳ್ಳುವ ಯಾವುದೇ ತರಬೇತಿ ಪಡೆದು ಕಲಾವಿದರಾದವರು ಅಲ್ಲ. ಒಂದರ್ಥದಲ್ಲಿ ಅವರು ಏಕಲವ್ಯನ ಹಾದಿಯಲ್ಲಿ ಸಾಗಿದವರು.

 ಔಷಧ ಕಂಪನಿಯೊಂದರಲ್ಲಿ ರಾತ್ರಿಪಾಳಿಯ ಕೆಲಸಕ್ಕೆ ಸೇರಿ ಜೀವನ ನಿರ್ವಹಣೆಗಾಗಿ ದುಡಿಯುತ್ತ ಹಗಲು  ಹೊತ್ತು ಭಾವನೆಗಳಿಗೆ ಆಕಾರಕೊಡುತ್ತ, ಬಣ್ಣ ಹಚ್ಚುತ್ತಾ ಬಂದ ಬಾಲ ಕಾರ್ಮಿಕ ಕಲಾವಿದ. ಕಲಾ ಶಾಲೆಯಲ್ಲಿ ತರಬೇತಿಗೆ ಸೇರಿಕೊಂಡರೂ ಪುಸ್ತಕದ ಬದನೆಕಾಯಿಯಿಂದ ಏನೂ ಉಪಯೋಗವಿಲ್ಲ ಎಂದು ಅರಿತು ಸುತ್ತಲಿನ ಬದುಕನ್ನು, ನಿಸರ್ಗವನ್ನು ತೆರೆದ ಕಣ್ಣಿನಿಂದ ನೋಡತೊಡಗಿದರು. ನಾಡಿನ ಬೇರುಗಳತ್ತ ಅಮೂರ್ತ ತುಡಿತ ಬಾಚಿತು.‌ ಕುಷ್ಠರೋಗಿ, ಭ್ರೂಣಹತ್ಯೆ, ಸಂಗೀತ ಪರಿಕರದ ಕುರಿತ ಕೃತಿಗಳು, ಸಂಜೆಯ ಹಾಡು, ಹಳದಿ ಹೂ, ಭತ್ತಕುಟ್ಟುವ ಮಹಿಳೆ, ಮಹಿಳೆಯರ ಮೋರ್ಚಾ, ಗುಡ್ಡದ ಅಂಚಿನಲ್ಲಿ, ಬಸ್ತಾರಿನ ಆದಿವಾಸಿಗಳು, ಯಕ್ಷಗಾನ, ಭೂತಾರಾಧನೆ ಹೀಗೆ ನೂರಾರು ಕೃತಿಗಳು ಕಲಾವಿದ ದೇವದಾಸರ ಪ್ರತಿಭೆ ಮತ್ತು ಪರಿಶ್ರಮಕ್ಕೆ ಕನ್ನಡಿ ಹಿಡಿಯುತ್ತವೆ.
ಅವರ ಕಲಾಕೃತಿಗಳ ವರ್ಣ ಸಂಯೋಜನೆ ಅಪೂರ್ವವೂ ಅದ್ಭುತವೂ ಆಗಿವೆ. ವ್ಯಾನ್ ಗೋನ ಕಲೆಗಾರಿಕೆಗೆ ಮರುಳಾದ ಶೆಟ್ಟಿ ಅವರು ಅವರಿಂದ ಪ್ರಭಾವಿತರಾದರೂ ತಮ್ಮ ಸ್ವಂತಿಕೆಯ ಛಾಪನ್ನು ಒತ್ತುವಲ್ಲಿ ಯಶಸ್ವಿಯಾಗಿದ್ದಾರೆ. ದಾದರ್ ನ ಮೋಡೆಲ್ ಕಲಾ ಶಾಲೆ, ಜೆ.ಜೆ ಕಲಾ ಶಾಲೆಯಲ್ಲಿ ಕಲಾವಿದನಾಗಲು ಬೇಕಾದ ತರಬೇತಿ ಪಡೆದು ಕೈತುಂಬಾ ಹಣ ಸಂಪಾದಿಸುವ ಅವಕಾಶಗಳಿದ್ದರೂ ಅದನ್ನೆಲ್ಲ ಬಿಟ್ಟು ಕಲಾತಪಸ್ವಿಯಾಗಿ ಉಳಿದು ಬಿಟ್ಟ ವಿರಳ ಕಲಾವಿದ ಅವರು.
ಕಲಾವಿದ ವ್ಯಾಪಾರಿಯಾಗಬಾರದು. ಕಲೆಯ ಉಪಾಸಕನಾಗಬೇಕು. ಕಲಾಕೃತಿಗಳು ನಿಜವಾದ ಕಲಾಪ್ರಿಯರ ಸ್ವತ್ತಾಗಬೇಕು. ಅದು ಶ್ರೀಮಂತರ ಆಡಂಬರದ, ವೈಭವದ ಪ್ರತಿಷ್ಠೆಯ ಸಂಕೇತವಾಗಿ ಬರೇ ಮಾರುಕಟ್ಟೆಯ ಸರಕಾಗಬಾರದು.

 ಒಂದು ಒಳ್ಳೆಯ ಕಲಾ ಪ್ರದರ್ಶನ ಮಾಡಲು ಕಲಾವಿದ ಸಾಲಸೋಲ ಮಾಡಬೇಕಾಗಿದೆ. ಹೊಸ ಪ್ರಾಡಕ್ಟ್ ಲಾಂಚಿಂಗ್ ಹೆಸರಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗಿದೆ. ಕಲಾ ವಿಮರ್ಶಕರೂ ದುಬಾರಿಯಾಗಿದ್ದಾರೆ. ಹೀಗಾಗಿ ನಾನು ವ್ಯಾಪಾರ, ನಾಟಕ, ಗಿಮಿಕ್ ಗಳಿಂದ ದೂರವಿದ್ದೇನೆ ಎನ್ನುತ್ತಾರೆ ಅವರು. ಕಲೆಯನ್ನು ಮೆಚ್ಚಿ ಕಲಾಕೃತಿಯನ್ನು ಕೊಂಡುಕೊಂಡರೆ ಕಲಾವಿದನ ಶ್ರಮ ಸಾರ್ಥಕ ಎಂಬ ವಿನಮ್ರ ಭಾವ ದೇವದಾಸ ಶೆಟ್ಟಿ ಅವರದು.
ಶೆಟ್ಟಿ ಅವರದು ಪ್ರಯೋಗಶೀಲ ಮನಸ್ಸು. ಜಲವರ್ಣ, ತೈಲವರ್ಣ, ಮ್ಯೂರಲ್ಸ್ ಪ್ರಯೋಗಗಳಲ್ಲಿ ಅವರು ಸಿದ್ಧಹಸ್ತರು. ಸಾಂದ್ರ ಫಲಕಗಳು ಅಥವಾ ಮಿನಿಯೇಚರ್ ಮ್ಯೂರಲ್ಸ್ ನಲ್ಲಿಯೂ ಅವರು ತಮ್ಮ ಕಲೆಗಾರಿಕೆಯನ್ನು ಮೆರೆದಿದ್ದಾರೆ. ಚಿತ್ರಕಲೆಯನ್ನು  ದೇವದಾಸ ಶೆಟ್ಟಿ ಅವರು ಉಪಜೀವನಕ್ಕೆ ಬಳಸಿಕೊಂಡವರಲ್ಲ. ಕಲೆಯ ಬಗೆಗೆ ಅಪಾರ ಗೌರವ , ಶ್ರದ್ಧೆಗಳಿರುವುದನ್ನು ನಾವು ಕಾಣಬಹುದು.
ಸರಳ ಸಜ್ಜನಿಕೆಗೆ ಹೆಸರಾದ ದೇವದಾಸ ಶೆಟ್ಟಿ ಅವರ ಕೃತಿಗಳು ಭೌದ್ಧಿಕ ಗೊಂದಲವನ್ನು ಉಂಟು ಮಾಡುವುದಿಲ್ಲ. ಅವರ ರೇಖೆಗಳು ಮಾತನಾಡುವ ಕಾವ್ಯಗಳೇ ಆಗಿವೆ. ಒಬ್ಬ ಸಂವೇದನಾಶೀಲ ಕಲಾವಿದನಾಗಿ ಸಾರ್ಥಕತೆಯನ್ನು ಅವರು ಪಡೆದುಕೊಂಡಿರುವುದು ಉಲ್ಲೇಖನೀಯ ಅಂಶ. ಕಲೆಯ ಬಯಲಲ್ಲಿ ನನ್ನದೇ ಆದ ಒಂದು ಕಾಲುದಾರಿಯಲ್ಲಿನಡೆದು ನನ್ನದೇ ಒಂದು ನಡಿಗೆಯನ್ನು ರೂಪಿಸಿಕೊಂಡಿದ್ದೇನೆ ಎಂಬ ತೃಪ್ತಿ ಅವರಿಗಿದೆ.
ವ್ಯವಹಾರಿಕೆಯಿಂದ ಮನುಷ್ಯ ಮರಗಟ್ಟಿ ಹೋಗಿರುವಾಗ ಕಲಾಕೃತಿಯಲ್ಲೂ ಭೌದ್ಧಿಕ ಆಟಾಟೋಪ ಹೇರಿ ನೋಡುಗನ ಕಣ್ಣಿಗೆ ಬಣ್ಣ ಎರಚಿ ಕವಿಸುವ ಅತ್ಯಾಧುನಿಕರ ಕಾಲವಿದು. ಆದರೆ ನಿಸರ್ಗದ ಮೂಲ ಭಾವಾನುರಾಗದ ಪಲ್ಲವಿಯನ್ನು ತನ್ನದೇ ಸರಳ ವರ್ಣಶ್ರುತಿಯಲ್ಲಿ ಮೀಟಬಯಸುವ ದೇವದಾಸರ ಕೃತಿಗಳು ತಮ್ಮ ಸರಳತೆ , ತೀವ್ರತೆಯಿಂದ ಸ್ಪಂದಿಸುವ ಕಳಕಳಿಯಿಂದ ಆಪ್ತವಾಗುತ್ತವೆ ಎಂಬುದಾಗಿ ಸಾಹಿತಿ ಡಾ.ಜಯಂತ್ ಕಾಯ್ಕಿಣಿ ಅವರು ದೇವದಾಸ ಶೆಟ್ಟಿ ಅವರ ಕಲಾನೈಪುಣ್ಯವನ್ನು ಸರಿಯಾಗಿ ಗುರುತಿಸಿದ್ದಾರೆ.
ದೇವುದಾಸ ಶೆಟ್ಟಿ ಅವರು ತಮ್ಮ ಬಣ್ಣದ ಬದುಕನ್ನು ಓದುಗರೊಂದಿಗೆ ಹಂಚಿಕೊಳ್ಳುತ್ತಾ ಬಂದಿದ್ದಾರೆ.  ಬದುಕು ಬಿಡಿಸಿದ ಚಿತ್ರಗಳು,  ನಾನು ಬಣ್ಣಗದ್ದಿದ ನನ್ನ ಜೀವನದ ಕ್ಯಾನುವಾಸು ಅವರ ಪ್ರಕಟಿತ ಕೃತಿಗಳು. ನಮ್ಮಲ್ಲಿ ಕಲಾ ಸಾಹಿತ್ಯ ಕಡಿಮೆ.‌ಕಲಾವಿದರು ಬರವಣಿಗೆ ನಡೆಸುವುದು ಅಪರೂಪ. ದೇವದಾಸ ಶೆಟ್ಟಿ ಅವರು ತಮ್ಮ ಕೃತಿಗಳಲ್ಲಿ ಅವರ ಜೀವನಗಾಥೆಯನ್ನು ಅನಾವರಣ ಗೊಳಿಸುತ್ತಾ ಬಂದಿರುವುದು
ವಿಶೇಷ. ತಮ್ಮ ಅಂತರಂಗದ ತುಡಿತ, ನೋವು,  ನಲಿವು, ಕಲಾಪ್ರಪಂಚದ ಸಾಮಯಿಕ ವಿದ್ಯಮಾನಗಳು, ಕಲಾವಿದನ ಕರ್ತವ್ಯ ನಿಷ್ಠೆ, ಕಲಾವಿಶೇಷ ಹೀಗೆ ನೂರಾರು ಸಂಗತಿಗಳನ್ನು ದೇವದಾಸ ಶೆಟ್ಟಿ ಅವರು ತಮ್ಮ ಕೃತಿಗಳಲ್ಲಿ ತೋಡಿಕೊಂಡಿದ್ದಾರೆ. ಇವು ಕಲಾ ಸಾಹಿತ್ಯಕ್ಕೆ ಮೌಲಿಕವಾದ ಕೊಡುಗೆಗಳಾಗಿವೆ.
ತಮ್ಮ ಚಿತ್ರಕಲೆಗಳ ಮೂಲಕ ದೇವದಾಸ ಶೆಟ್ಟಿ ಅವರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಭಾರತದಲ್ಲಿ ಜಪಾನ್, ಜರ್ಮನಿ,
ಈಜಿಪ್ಟ್ ಅಮೇರಿಕಾ ದುಬಾಯಿ  ವೆಸ್ಟ್ ಇಂಡೀಸ್
ಮೊದಲಾದ ರಾಷ್ಟ್ರಗಳಲ್ಲಿಯೂ ಅವರ ಚಿತ್ರಪ್ರದರ್ಶನಗಳು ನಡೆದಿವೆ ಎಂಬುದು ಹೆಮ್ಮೆಯ ಸಂಗತಿ.‌
ಕಲಾಲೋಕದಲ್ಲಿ ಸ್ವಪರಿಶ್ರಮದಿಂದ ಅಪೂರ್ವ ಸಾಧನೆ ಗೈದ ಈ ಕಲಾವಿದನನ್ನು ಕಲ್ಕತ್ತಾದಲ್ಲಿ ಶಾಂತಿನಿಕೇತನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಭಾರತೀಯ ಕಲಾ ಸಮಾಜ, ಆಳ್ವಾಸ್ ವರ್ಣ ವಿರಾಸತ್ ರಾಷ್ಟ್ರೀಯ ಪುರಸ್ಕಾರ ಮೊದಲಾದ ಮಾನ ಸಮ್ಮಾನಗಳು ಸಂದಿವೆ. ಕರ್ನಾಟಕ ಸರಕಾರ, ಅಕಾಡೆಮಿ ಇವರ ಸಾಧನೆಯನ್ನು ಗುರುತಿಸಿ ಗೌರವಿಸಬೇಕಾಗಿದೆ.ಕಲಾವಿದ ದೇವದಾಸ ಶೆಟ್ಟಿ ಅವರಿಗೆ ಇಂದು ಎಪ್ಪತ್ತೈದನೆಯ ಹುಟ್ಟು ಹಬ್ಬದ ಸಂಭ್ರಮ ಅವರಿಗೆ ಎಲ್ಲಾ ತರದ ಶುಭಗಳಿರಲಿ

✍️
ಡಾ. ಜಿ. ಎನ್. ಉಪಾಧ್ಯ
(ಪ್ರಾಧ್ಯಾಪಕರು, ಮುಖ್ಯಸ್ಥರು - ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ) 

No comments:

Post a Comment

75ರ ಸಂಭ್ರಮದಲ್ಲಿ ಬಣ್ಣಗಳ ಮಾಂತ್ರಿಕ ಕಲಾವಿದ ದೇವದಾಸ ಶೆಟ್ಟಿ

ಹೆಸರಾಂತ ಕಲಾವಿದ ದೇವದಾಸ ಶೆಟ್ಟಿ ಅವರು ಚಿತ್ರಕಾರರಾಗಿ, ಲೇಖಕರಾಗಿ ಜನಪ್ರಿಯರಾಗಿದ್ದಾರೆ. ಮುಂಬಯಿ ವಾಣಿಜ್ಯ ನಗರವಷ್ಟೇ ಅಲ್ಲ; ಕಲೆ, ಸಾಹಿತ್ಯ ಬಹು ಸಂಸ್ಕೃತಿಗಳ ಸಂಗಮವ...